ಗ್ರುಫಿಯಸ್, ಆಂಡ್ರೆಯಾಸ್

1616 - 64. ಜರ್ಮನ್ ಕವಿ ಮತ್ತು ನಾಟಕಕಾರ. ಲೂಥರನ್ ಪಾದ್ರಿಯ ಮಗ. ಈತನ ಬಾಲ್ಯದಲ್ಲಿಯೇ ತಂದೆ ವಿಷಪ್ರಾಶನ ಮಾಡಿ ಸಾವನ್ನಪ್ಪಿದ. ಕಡುಬಡತನದಲ್ಲಿ ಅನಾಥ ಬಾಲಕನಾಗಿ ಬೆಳೆದು ಈತ ಬಾಲ್ಯದ ಸಂಕಷ್ಟಗಳನ್ನು ಜೀವನವಿಡೀ ಮರೆಯದಾದ. ಹೇಗೋ ಅವರಿವರ ಸಹಾಯದಿಂದ ವಿದ್ಯಾಭ್ಯಾಸ ಮಾಡಿ ಇಟಲಿ, ಹಾಲೆಂಡ್, ಫ್ರಾನ್ಸ್, ದೇಶಗಳನ್ನು ಸುತ್ತಿಬಂದ. ಅನಂತರ ಗ್ಲೊಗೌ ನಗರದ ಮುಖ್ಯ ಅಧಿಕಾರಿಯಾಗಿದ್ದು ಅಲ್ಲಿಯೇ ಕಾಲವಾದ.
ಈತ ಭಾವಗೀತೆ ಮತ್ತು ಬ್ಯಾರಾಕ್ ಶೈಲಿಯ ನಾಟಕಗಳಿಗೆ ಹೆಸರಾದವ. ನಾಟಕಕಾರ ಸೆನಕನ ಶೈಲಿಯ ಪ್ರಭಾವಕ್ಕೆ ಒಳಗಾದ ಈತನ ನಾಟಕಗಳೂ ಕ್ರೌರ್ಯ ತಿತಿಕ್ಷೆ, ನೈತಿಕ ಉತ್ಸಾಹಗಳಿಂದ ತುಂಬಿವೆ. ಸ್ಟೋಯಿಕ್ ಆದರ್ಶಗಳಿಂದ ತುಂಬಿದ ಈತನ ಗಂಭೀರ ಕಾವ್ಯ ಶೈಲಿಯ ಉನ್ನತಿಯ ಮೂಲಕ ಜರ್ಮನ್ ಭಾಷೆಯ ಕಾವ್ಯದ ಹಳೆಯ ರೂಪಗಳನ್ನು ಸ್ಥಿರಗೊಳಿಸಲು ಕಾರಣವಾಯಿತು. ಹೀಗೆ ಪಳಗಿದ ಅಭಿಜಾತ ರೂಪಕ್ಕೆ ಅಳವಡಿಸಿಕೊಂಡ ಈತನ ವಿಶೇಷ ಕಾವ್ಯರೂಪವೆಂದರೆ ಪಿಂಡಾರಿಕ್ ಓಡ್, ಈತ ಭಾವಗೀತೆಗಳಲ್ಲದೆ ಸುನೀತಗಳು, ಸೂಳ್ನುಡಿಗಳು, (ಎಪಿಗ್ರ್ಯಾಮ್) ಮತ್ತು ಧಾರ್ಮಿಕ ಕವನಗಳನ್ನೂ ರಚಿಸಿದ್ದಾನೆ. ಈತನ ನಾಟಕಗಳು ದೀರ್ಘ ಸಂಭಾಷಣೆ ಹಾಗೂ ಅತಿಶಯ ಗಾಂಭೀರ್ಯದಿಂದಾಗಿ ರಂಗಭೂಮಿಯ ಮೇಲೆ ಪ್ರದರ್ಶಿಸಲು ಅಷ್ಟೊಂದು ಯೋಗ್ಯವಲ್ಲದಿದ್ದರೂ ಅವು ಕಾವ್ಯಮಯವಾಗಿವೆ. ಈತ ಅನುಪಮ ನಿರಾಶಾವಾದಿಯಾದರೂ ಕೆಲವು ಸುಖಾಂತ ನಾಟಕಗಳನ್ನೂ ರಚಿಸಿದ್ದಾನೆ. 
(ಎಸ್.ಎಂ.ಪಿ.)

ಈತನ ಭಾವಗೀತೆಗಳಲ್ಲಿ ಪ್ರಖ್ಯಾತವಾದುದು ಕಿರ್ಚಾಫ್ಸ್‍ಗೆಡಾಂಕೆನ್ (1656). ಈತ ಬರೆದ ಹರ್ಷ ನಾಟಕಗಳು ಹೆಚ್ಚು ಖ್ಯಾತಿ ಗಳಿಸಿವೆ. ಅವುಗಳಲ್ಲಿ ಅಬ್ಸರ್ಡಕಾಮಿಕ, ಓಡರ್ ಹೆರ್ ಪೇಟರ್ ಸ್ಕ್ವೆಂಟ್ (1663), ತುಂಬ ಪ್ರಸಿದ್ಧವಾದವು. ಇದು ಷೇಕ್ಸ್‍ಪಿಯರನ ದಿ ಮಿಡ್‍ಸಮರ್ ನೈಟ್ಸ್ ಡ್ರೀಮ್ ನಾಟಕದ ಉಪಕಥೆಯೊಂದನ್ನು ಆಧರಿಸಿ ರಚಿತವಾದುದು. ಸೈಲೀಷಿಯನ್ ಭಾಷೆಯಲ್ಲಿ ಬರೆದ ಡೀ ಗೇಲಿಬ್ಟೆ ಡಾರ್ನರೋಸೆó (1660) ಎಂಬ ನಾಟಕ ಸರಳ ಸುಂದರವಾಗಿದ್ದು ಉತ್ತಮೋತ್ತಮ ಕೃತಿ ಎನಿಸಿದೆ. ಜರ್ಮನ್ ನಾಟಕ ಸಾಹಿತ್ಯದಲ್ಲಿ ಆ ಮಟ್ಟದ ನಾಟಕವನ್ನು ಆ ಶತಕದಲ್ಲಿ ಕಾಣುವುದು ವಿರಳ. ಇವಲ್ಲದೆ ಈತ ಐದು ಗಂಭೀರ ನಾಟಕಗಳನ್ನು ರಚಿಸಿದ್ದಾನೆ: ಕರೋಲಸ್ ಸ್ಟುವಾರ್ಡಸ್ (1649); ಲಿಯೋ ಆರ್ಮೀನಿಯಸ್ (1646) ಕ್ಯಾಥರೀನ ಫಾನ್ ಜಾರ್ಜಿಯೆನ್ (1657); ಕಾರ್ಡೀನಿಯೊ ಉಂಟ್ ಸೆಲಿಂಡೆ (1657); ಪ್ಯಾಪಿನಿಯಾನಸ್ (1663). ಜರ್ಮನ್ ರೂಪಕ ಸಾಹಿತ್ಯ ಕ್ಷೇತ್ರದಲ್ಲಿ ಗ್ರುಫಿಯಸ್‍ನಿಗೆ ಸರಿದೂಗಬಲ್ಲ ನಾಟಕಕಾರರು ಅವನಿಗಿಂತ ಮೊದಲು ಇರಲಿಲ್ಲವೆಂದೂ ಅವನಾದ ಮೇಲೆ 18 ನೆಯ ಶತಮಾನದವರೆಗೂ ಅವನಂಥವರು ಕಾಣಸಿಗರೆಂದೂ ವಿಮರ್ಶಕರ ಅಭಿಪ್ರಾಯ.
ಈತನ ಎಲ್ಲ ನಾಟಕಗಳನ್ನು ಮತ್ತು ಭಾವಗೀತೆಗಳನ್ನು 3 ಸಂಪುಟಗಳಲ್ಲಿ (1878, 1882, 1884) ಎಚ್. ಪಾಮ್ ಪ್ರಕಟಿಸಿದ್ದಾನೆ.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ